Monday, October 19, 2015

ಮನಸು ಮುನಿಸುಗಳ ನಡುವೆ...

                   ಲೆಕ್ಕ ತಪ್ಪೋವಷ್ಟು ಖುಷಿಗಳು, ದಕ್ಕಿರೋ ಒಂದಿಷ್ಟು ಚಂದದ ಗೆಲುವುಗಳು, ಬಾಯಿ ನೋಯೋವಷ್ಟು ಮಾತುಗಳು ಎಲ್ಲದರ ಆಚೆ ನಂಗವನ ನೆನಪು ಈ ಇಳಿ ಸಂಜೆಗೆ ಅಂತೆಲ್ಲಾ ಸ್ಪಟಿಕ ಹೇಳ್ತಿದ್ರೆ ಇಷ್ಟಾಗ್ಯೂ ಮಂಡಿಯೂರದ ನಿನ್ನ ಮನಸ ಬಗೆಗೆ ನಂಗಿನಿತು ಮುನಿಸು ಅಂತಂದು ಅವಳ ಸಂಜೆಯನ್ನ ಅವಳಿಗೇ ಬಿಟ್ಟು ಎದ್ದು ಬಂದಾದ ಮೇಲ್ಯಾಕೋ ನಂಗವಳು ಪ್ರೀತಿಸೋ ಬಗೆ ಕಾಡ್ತಿದೆ. 

                   ಬದುಕ ಭಾಗವಾಗಿ ಬಿಟ್ಟಿರೋ ಹುಡುಗ ಅದ್ಯಾವುದೋ ಮುನಿಸಿಗೆ ಮತ್ತೆ ನಿನ್ನ ಬದುಕಿಗೆ ಬರಲಾರೆ ಅಂತಂದಾದ ಮೇಲೂ ಅಷ್ಟೇ ಇಷ್ಟಪಡೋ ಅವಳ ಬಗೆಗೆ ಕುತೂಹಲ ಮೂಡೋಕೂ ಮುಂಚೆಯೇ ಅವಳ ಹಠಗಳನ್ನೆಲ್ಲಾ ಪ್ರೀತಿಯಿಂದಲೇ ಸಹಿಸಿಕೊಳ್ತಿದ್ದ ಆ ಕಡಲೂರ ಹುಡುಗನ  ಬಗೆಗಿಷ್ಟು  ಆತ್ಮೀಯತೆ  ಮೂಡಿಬಿಟ್ಟಿರುತ್ತೆ ನನ್ನಲ್ಲಿ.  ಜೊತೆಗೆ ಹೀಗೆಲ್ಲಾ ಪ್ರೀತಿಸೋಕೆ ಸಾಧ್ಯವಾ ಅನ್ನೋ ಪ್ರಶ್ನೆ ಕೂಡಾ. ಸಣ್ಣ ಸಣ್ಣದಕ್ಕೂ ಬೆಟ್ಟದಷ್ಟು ಖುಷಿ ಪಡೋ ಹುಡುಗಿ, ಆ ಭಾವಗಳನ್ನೆಲ್ಲಾ ಮುಟ್ಟಿಯೂ ನೋಡದೇ ಹೊರಟುಬಿಡೋ ಹುಡುಗ ಆದರೂ ಚಂದ ಅನ್ನಿಸೋವಷ್ಟು ಖುಷಿಯಿದೆ ನಂಗಾ ಪ್ರೀತಿಯ ಬಗೆಗೆ. 

                    ಅದೊಂದಿಷ್ಟು ಮುನಿಸುಗಳ ಮಧ್ಯ ಪ್ರೀತಿಯ ಮನಸೆಲ್ಲೋ ಮುದುಡಿ ಕೂತಿದೆ ಅಂತನಿಸಿ ಕಾರಣವ ಹುಡುಕ ಹೊರಟವಳಿಗೆ ಅವರಿಬ್ಬರೂ ಗೊಂದಲವಾಗೇ ಉಳಿದುಬಿಟ್ಟಿದ್ದಾರೆ. ಅವಳದಿಷ್ಟು ಅನಿವಾರ್ಯತೆಗಳ ಜೊತೆ ಕಳೆದು ಹೋಗಿರೋ ಹುಡುಗಿಗೆ  ಸುರಿಯೋ ಮಳೆ, ಬೀಳೋ ಮಂಜು, ಅವನಿಷ್ಟದ ಆ ಹಾದಿ, ಆ  ಜೋಡಿ ನಕ್ಷತ್ರ  ಊಹುಂ! ಯಾವುದೂ ಅಷ್ಟಾಗಿ ಕಾಡ್ತಿಲ್ಲ ಅನ್ನೋದೇ ಕಳವಳ ನಂಗೆ. ಬದುಕು ಹೇಗಿದ್ರೂ ಇಡಿ ಇಡಿಯಾಗಿ ಪ್ರೀತಿಸೋ ಅವಳನ್ನ ಇವೆಲ್ಲವೂ ಮತ್ತೆ ಮತ್ತೆ ಕಾಡಲಿ ಅನ್ನೋ ಕಾತರತೆ. ಇನ್ನು ಅವನೋ ಮುಳುಗಿ ಹೋಗಿದ್ದಾನೆ ಆ ದೂರದ ಜನ ಜಂಗುಳಿಯ ಅದ್ಯಾವುದೋ ಬೀದಿಯಲ್ಲಿ. ಯಾರ ದೃಷ್ಟಿ ತಗುಲೇತೋ ಅಂತ ಕೇಳಿಬಿಡಲಾ ಅಂದು ಕೊಳ್ಳುವ ಹೊತ್ತಿಗೇ ಅವ ಅಲ್ಲಿ ಮಗ್ಗುಲು ಬದಲಿಸಿರೋ ಸೂಚನೆ. ಪ್ರಶ್ನೆಗಳನ್ನೆಲ್ಲಾ ಹಾಗೆಯೇ ಇಟ್ಟುಕೊಂಡು ಅದೊಂದು ಅರ್ಥವಾಗದ ನಿಟ್ಟುಸಿರ ಜೊತೆ ಸುಮ್ಮನಾಗಿಬಿಡ್ತೀನಿ. 
ಮತ್ತೆ ಸಂಜೆಗಳು ಬೇಸರ ಅಂತನ್ನಿಸೋಕೆ ಶುರುವಾಗುತ್ತೆ. 
 



                      ಸೂರ್ಯ ಮುಳುಗೋ ಘಳಿಗೆಯಲ್ಲಿ ನೆನಪುಗಳ ಜೊತೆ ಅವಳೊಬ್ಬಳನ್ನೇ  ಬಿಟ್ಟು ಬಂದವಳಿಗೆ ಅದ್ಯಾಕೋ  ಮಾತಾಡಿಸೋ ಮನಸ್ಸಾಗಿ 'ಅವ ಬದುಕಿಗೆ ಬಂದ್ರೆ ಬದುಕು ಮತ್ತಷ್ಟು ಚಂದವಿರುತ್ತೇನೋ ಅಲ್ವೇನೆ?' ಅಂತಂದು ಟೈಪಿಸಿದ್ದವಳಿಗೆ ರಿಸೀವ್ ಆದ ಅವಳ ಮೆಸೇಜ್ ನೋಡಿ ಖುಷಿ ಪಡಲಾ ಬೇಸರಿಸಲಾ ಅನ್ನೋ ಗೊಂದಲ ಕಾಡ್ತಿದೆ. 
"ಕನಸು ಗಗನಯಾಮಿ- ಅವ ಬೇಲಿಯಾಚೆಗಿನ ನಗು. ಬೇಲಿ ಮರೆಯಿಂದ ಇಣುಕೋ ನಗೆಯ ಸೋಕಿದ ಗಾಳಿಗೆ ತೋಳ್ದೆರೆದ ಹಸುಳೆ ನಾ". 
ಟೈಪಿಸಿರೋ "ಅವ  ಬದುಕಿಗೆ ...... " ಮೆಸೇಜ್ ಡ್ರಾಪ್ಟ್ ಗೆ ಸೇರಿ ಅದೆಷ್ಟೋ ಸಮಯವಾಯ್ತಲ್ಲ ಅನ್ನೋ ಭಾವ ಕತ್ತಲಾವರಿಸಿ ಮೂಡಿರೋ ಜೋಡಿ ನಕ್ಷತ್ರಗಳು ನನ್ನ ಅಣುಕಿಸುತ್ತಿವೆಯೇನೋ ಅಂತನಿಸೋವಾಗ ಅರಿವಾಯ್ತು. 
ಮತ್ತೆ ಟೈಪಿಸ್ತಿದೀನಿ ನಾ ... 
ಒಲವು ಕವಲೊಡೆಯದಿರಲಿ, ನಿಲುವು ಮಾಸದಿರಲಿ, ಅವ ಅನ್ನೋ ನಗು ಕೈ ತಾಕಲಿ. 
ನಂಗೊತ್ತು ಅರ್ಥವೇ ಆಗದ ತರಹ ನಕ್ಕು ಸುಮ್ಮನಾಗ್ತಾಳೆ ಅವಳು. 
ಮನಸು ಮುನಿಸುಗಳ ನಡುವೆ ಪ್ರೀತಿ ನಲುಗದಿರಲೇ ಮುದ್ದಮ್ಮಾ. 

6 comments:

  1. ಒಲವು
    ಪ್ರೀತಿ
    ಮಮತೆ
    ಪ್ರೇಮ
    ಅವಿಷ್ಕಾರ
    ಇವುಗಳ ತಾಕಲಾಟ, ಮನಸುಗಳ ಹೊಯ್ದಾಟ..
    ಮನಸ್ಸಿಗೂ ಮುನಿಸೇ ಎನ್ನುವ ಪ್ರಶ್ನೆ ಮೂಡಿದಾಗ.. ಮನಸ್ಸು ಒಂದು ಜೀವಿಯೇ ಅಲ್ಲವೇ ಎನ್ನುವ ಉತ್ತರವನ್ನು ಎಬ್ಬಿಸುವ
    ಬರಹ. ಕಡಲಿನ ಅಲೆಗಳ ಹಾಗೆ ಹುಯ್ದಾಡುವ ಭಾವಗಳ ತೆರೆಗಳನ್ನು ಪದಗಳಾಗಿ ಹರಿಯಬಿಟ್ಟಿರುವ ಪರಿ ಸೊಗಸಾಗಿದೆ

    ReplyDelete
  2. ಕನಸು ಗಗನಯಾಮಿ.. ಅವ ಬೇಲಿಯಾಚೆಗಿನ ನಗು... ಇದನ್ನು ವಾಟ್ಸನ್ ಆ್ಯಪ್ ನ ಸ್ಟೇಟಸ್ ನಲ್ಲಿ ನೋಡಿದಾಗಲೇ ಎರವಲು ಪಡೆದುಕೊಳ್ಳುವ ಮನಸ್ಸಾಗಿತ್ತು.... ಇದರ ಜೊತೆಗಿನ ಭಾವಗಳು ಇನ್ನೂ ಬಲವಾಗಿ ಕಾಡುತ್ತವೆ ಕಣೆ ... "ಒಲವು ಕವಲೊಡೆಯದಿರಲಿ"....

    ReplyDelete
  3. Nice write up little sis

    ReplyDelete
  4. ninnashte muddaada baraha kane...bhaava sakath ishta aaytu :) kanasu gaganayaami, ava beliyaachegina nagu woww super saalu..

    ReplyDelete
  5. Barediro ella line super aagide. ege barita eri.
    gud luck

    ReplyDelete
  6. Mimma lekhana tumbha esta aetu thanks

    ReplyDelete